ತ್ರಿಪದಿಗಳು

ತ್ರಿಪದಿ

ಕರ್ಣಾಟಕ ವಿಷಯ ಜಾತಿ ಛಂದಸ್ಸುಗಳಲ್ಲಿ ತ್ರಿಪದಿಯೂ ಒಂದು. ಇದಕ್ಕೆ ಜನಪ್ರಿಯತೆ,
ಪ್ರಾಚೀನತೆಗಳೆರಡೂ ಇವೆ. ಪ್ರಾಚೀನ ಕಾವ್ಯಗಳಲ್ಲಿ ಅಂದರೆ ಹಳಗನ್ನಡ ಕಾವ್ಯ, ಶಾಸ್ತ್ರ ಸಾಹಿತ್ಯಮತ್ತು ಮುಖ್ಯವಾಗಿ ಜನಪದ ಸಾಹಿತ್ಯಗಳಲ್ಲಿ ತ್ರಿಪದಿ ಸ್ಥಾನ ಪಡೆದಿದೆ. ಬಿಡಿಬಿಡಿಯಾಗಿ ಅಲ್ಲಲ್ಲಿ ಪಂಪನನ್ನೂ ಒಳಗೊಂಡಂತೆ ಮುಖ್ಯ ಕವಿಗಳಿಂದ ಬಳಸಲ್ಪಟ್ಟ ಈ ಛಂದಸ್ಸು, ಇಡೀ ಕಾವ್ಯ
ರೂಪವಾಗಿ ಮುಖ್ಯವಾಹಿನಿಯ ನೆಲೆಯಲ್ಲಿ ಕಾಣಿಸಿಕೊಳ್ಳುವುದು ೧೨ನೆಯ ಶತಮಾನದಿಂದ ಈಚೆಗೆ ಎಂದು ಗುರುತಿಸಲಾಗಿದೆ.
ಮೂರು ಸಾಲುಗಳನ್ನು ಅಥವಾ ಪಾದಗಳನ್ನು ಒಳಗೊಂಡಿರುವ ಮೇಲ್ನೋಟಕ್ಕೆ ಸರಳವಾಗಿ
ಕಾಣುವ ಇದನ್ನು ತ್ರಿಪದಿ ಎಂದು ಕರೆಯಲಾಗಿದೆ. ತಿವದಿ ಎನ್ನುವ ತದ್ಭವ ರೂಪದೊಂದಿಗೆ ತಿವಿದಿ,
ತ್ರಿವಿಧಿ ತ್ರಿಪದಿಕಾ ಎನ್ನುವ ಮುಂತಾದ ರೂಪಗಳಿಂದಲೂ ತ್ರಿಪದಿಯನ್ನು ಗುರುತಿಸಲಾಗಿದೆ.
ನಾಗವರ್ಮ ತನ್ನ 'ಛಂದೋಂಬುಧಿ' ಯಲ್ಲಿ ತ್ರಿಪದಿಯನ್ನು ಕುರಿತು ಮೊದಲಿಗೆ ಪ್ರಸ್ತಾಪಿಸಿದ್ದಾನೆ.
ಅವನು ತ್ರಿಪದಿಯ ಲಕ್ಷಣವನ್ನು ಹೇಳುವಾಗ ಮೂರು (೩) ಪಾದಗಳು ಮತ್ತು ಒಟ್ಟು ೧೧
ಗಣಗಳು ಎಂದು ಗುರುತಿಸುತ್ತಾನೆ. ಇವುಗಳಲ್ಲಿ ೬ ಮತ್ತು ೧೦ ನೆಯ ಗಣಗಳು ಬ್ರಹ್ಮಗಣಗಳಾದರೆ,
ಉಳಿದವು ವಿಷ್ಣುಗಣಗಳು ಎಂಬುದು ಅವನ ವಿಂಗಡಣೆ, ಚಿತ್ರಾ ಮತ್ತು ವಿಚಿತ್ರ ತ್ರಿಪದಿಗಳೆಂಬ
ಬೇಧವನ್ನೂ ಹೇಳುತ್ತಾನೆ.
ನಿಜಗುಣ ಶಿವಯೋಗಿ (೧೫೦೦) 'ಅನುಭವಸಾರ' ಮತ್ತು 'ಅರವತ್ತು ಮೂವರು
ಪುರಾತನರ 'ತ್ರಿವಿಧಿ' ಎನ್ನುವ ಎರಡು ಕೃತಿಗಳನ್ನು ರಚಿಸಿದ್ದಾನೆ. ಅನುಭವಸಾರದಲ್ಲಿ ಒಟ್ಟು ೫೩೫
ತ್ರಿಪದಿಗಳಿವೆ. ಪುರಾತನರ ತ್ರಿವಿಧಿಯಲ್ಲಿ ೭೭ ಮಾತ್ರಾ ತ್ರಿವಿಧಿಗಳಿವೆ. ರಾಮೇಂದ್ರನೆಂಬ ಕವಿಯ
'ಸೌಂದರ ಕಥಾರತ್ನ' ವೆನ್ನುವ ಕೃತಿ ತ್ರಿಪದಿಯಲ್ಲಿದೆಯೆಂದು ಹೇಳಲಾಗಿದ್ದು ಇದನ್ನು ಪ್ರಾಚೀನ
ತ್ರಿಪದಿ ಕೃತಿಗಳಲ್ಲೇ ಬಹುಶಃ ಹಿರಿದೆಂದು ಗ್ರಹಿಸಲಾಗಿದೆ.
ಇದೇ ಹೊತ್ತಿನಲ್ಲಿ ಕನ್ನಡದ ಬಹು ದೊಡ್ಡ ತ್ರಿಪದಿಕಾರನನ್ನಲಾದ ಸರ್ವಜ್ಞನೂ
ಕಾಣಸಿಗುತ್ತಾನೆ. ಇವನ ತ್ರಿಪದಿಗಳ ಸಂಖ್ಯೆಯ ಬಗೆಗಾಗಲಿ, ಮೂಲದ ಬಗೆಗಾಗಲಿ ಖಚಿತತೆಯಿನ್ನೂ
ಲಭ್ಯವಾಗಿಲ್ಲ. ಸರ್ವಜ್ಞ ತನ್ನ ರಚನೆಗೆ ಬಳಸಿಕೊಂಡ ವಸ್ತು ವೈವಿಧ್ಯ ಅನನ್ಯವಾದುದಾಗಿದೆ.
ವಿಡಂಬನೆ, ಟೀಕೆ, ವ್ಯಾಖ್ಯಾನ, ನೀತಿಬೋಧೆ ಚಿಂತನೆ - ಇಂತಹ ಸಂಗತಿಗಳನ್ನು ಅದ್ಭುತವಾಗಿ
ತ್ರಿಪದಿಗಳ ಮೂಲಕ ವ್ಯಕ್ತಪಡಿಸುವ ಸರ್ವಜ್ಞ ಆ ಮೂಲಕ ಸರಳತೆಯನ್ನು, ಸಹಜತೆಯನ್ನು
ವಸ್ತು ಮತ್ತು ಮುಖ್ಯವಾಗಿ ಭಾಷೆಯ ನೆಲೆಯಲ್ಲಿ ಸಾಧಿಸುತ್ತಾನೆ. ಹಾಗೆಯೇ ಬಹುಶ: ತ್ರಿಪದಿಗೆ
ಈ ಹಿಂದೆಂದೂ ಒದಗಿಬಂದಿರದಂತಹ ಪರಿಪೂರ್ಣತೆಯನ್ನು ಸರ್ವಜ್ಞ ತಂದುಕೊಡುತ್ತಾನೆ.
ಆದ್ದರಿಂದಲೂ ಬಹುಶಃ ಸರ್ವಜ್ಞನಷ್ಟು ಯಶಸ್ವಿಯಾಗಿ 'ತ್ರಿಪದಿ' ಯನ್ನು ಬಳಸಿಕೊಂಡವರು
ಮತ್ತೊಬ್ಬರಿಲ್ಲ ಎನ್ನುವ ತೀರ್ಮಾನಕ್ಕೂ ವಿದ್ವಾಂಸರು ಬಂದಿದ್ದಾರೆ. 'ತ್ರಿಪದಿಯ ತ್ರಿವಿಕ್ರಮ'
ಎಂದೆಲ್ಲಾ ಅವನನ್ನು ಕರೆಯಲಾಗಿದೆ.

 

Comments