Posts

ತ್ರಿಪದಿಗಳು

ತ್ರಿಪದಿ ಕರ್ಣಾಟಕ ವಿಷಯ ಜಾತಿ ಛಂದಸ್ಸುಗಳಲ್ಲಿ ತ್ರಿಪದಿಯೂ ಒಂದು. ಇದಕ್ಕೆ ಜನಪ್ರಿಯತೆ, ಪ್ರಾಚೀನತೆಗಳೆರಡೂ ಇವೆ. ಪ್ರಾಚೀನ ಕಾವ್ಯಗಳಲ್ಲಿ ಅಂದರೆ ಹಳಗನ್ನಡ ಕಾವ್ಯ, ಶಾಸ್ತ್ರ ಸಾಹಿತ್ಯಮತ್ತು ಮುಖ್ಯವಾಗಿ ಜನಪದ ಸಾಹಿತ್ಯಗಳಲ್ಲಿ ತ್ರಿಪದಿ ಸ್ಥಾನ ಪಡೆದಿದೆ. ಬಿಡಿಬಿಡಿಯಾಗಿ ಅಲ್ಲಲ್ಲಿ ಪಂಪನನ್ನೂ ಒಳಗೊಂಡಂತೆ ಮುಖ್ಯ ಕವಿಗಳಿಂದ ಬಳಸಲ್ಪಟ್ಟ ಈ ಛಂದಸ್ಸು, ಇಡೀ ಕಾವ್ಯ ರೂಪವಾಗಿ ಮುಖ್ಯವಾಹಿನಿಯ ನೆಲೆಯಲ್ಲಿ ಕಾಣಿಸಿಕೊಳ್ಳುವುದು ೧೨ನೆಯ ಶತಮಾನದಿಂದ ಈಚೆಗೆ ಎಂದು ಗುರುತಿಸಲಾಗಿದೆ. ಮೂರು ಸಾಲುಗಳನ್ನು ಅಥವಾ ಪಾದಗಳನ್ನು ಒಳಗೊಂಡಿರುವ ಮೇಲ್ನೋಟಕ್ಕೆ ಸರಳವಾಗಿ ಕಾಣುವ ಇದನ್ನು ತ್ರಿಪದಿ ಎಂದು ಕರೆಯಲಾಗಿದೆ. ತಿವದಿ ಎನ್ನುವ ತದ್ಭವ ರೂಪದೊಂದಿಗೆ ತಿವಿದಿ, ತ್ರಿವಿಧಿ ತ್ರಿಪದಿಕಾ ಎನ್ನುವ ಮುಂತಾದ ರೂಪಗಳಿಂದಲೂ ತ್ರಿಪದಿಯನ್ನು ಗುರುತಿಸಲಾಗಿದೆ. ನಾಗವರ್ಮ ತನ್ನ 'ಛಂದೋಂಬುಧಿ' ಯಲ್ಲಿ ತ್ರಿಪದಿಯನ್ನು ಕುರಿತು ಮೊದಲಿಗೆ ಪ್ರಸ್ತಾಪಿಸಿದ್ದಾನೆ. ಅವನು ತ್ರಿಪದಿಯ ಲಕ್ಷಣವನ್ನು ಹೇಳುವಾಗ ಮೂರು (೩) ಪಾದಗಳು ಮತ್ತು ಒಟ್ಟು ೧೧ ಗಣಗಳು ಎಂದು ಗುರುತಿಸುತ್ತಾನೆ. ಇವುಗಳಲ್ಲಿ ೬ ಮತ್ತು ೧೦ ನೆಯ ಗಣಗಳು ಬ್ರಹ್ಮಗಣಗಳಾದರೆ, ಉಳಿದವು ವಿಷ್ಣುಗಣಗಳು ಎಂಬುದು ಅವನ ವಿಂಗಡಣೆ, ಚಿತ್ರಾ ಮತ್ತು ವಿಚಿತ್ರ ತ್ರಿಪದಿಗಳೆಂಬ ಬೇಧವನ್ನೂ ಹೇಳುತ್ತಾನೆ. ನಿಜಗುಣ ಶಿವಯೋಗಿ (೧೫೦೦) 'ಅನುಭವಸಾರ' ಮತ್ತು 'ಅರವತ್ತು ಮೂವರು ಪುರಾತನರ 'ತ್ರಿವ